ಕೃತಿಸ್ವಾಮ್ಯ

ಸಾಹಿತ್ಯ, ನಾಟಕ, ಸಂಗೀತ ಮತ್ತು ಕಲಾಕೃತಿಗಳನ್ನು ಅಧಿಕಾರವಿಲ್ಲದೆ ನಕಲು ಮಾಡುವುದು, ರೂಪಾಂತರಿಸುವುದು, ಮರುಪ್ರಕಟಿಸುವುದು, ಪ್ರದರ್ಶಿಸುವುದು ಮುಂತಾದುವುಗಳ ವಿರುದ್ಧ ಅವುಗಳ ಕರ್ತೃಗಳಿಗೆ ಕಾನೂನು ರೀತ್ಯಾ ನೀಡಲಾಗಿರುವ ರಕ್ಷಣೆಯ ಹಕ್ಕು (ಕಾಪಿರೈಟ್) ಒಂದು ಸಾಹಿತ್ಯ, ನಾಟಕ, ಸಂಗೀತ ಇಲ್ಲವೇ ಕಲಾಕೃತಿಯ ಪ್ರತಿಗಳನ್ನು ಮಾಡುವ, ಮಾರುವ ಇಲ್ಲವೇ ನಿಯಂತ್ರಿಸುವ, ಅನನ್ಯ ಹಕ್ಕು ಇದು. ಇದು ಕಾನೂನಿನಿಂದ ನೀಡಲಾದ ಹಕ್ಕು. ಈ ಹಕ್ಕು ಒಂದು ಕಾಲಾವಧಿಗೆ ಸೀಮಿತವಾಗಿರುತ್ತದೆ. ಒಂದು ಕೃತಿ ಮೊದಲ ಬಾರಿಗೆ ಪ್ರಕಟವಾದ ಮೇಲೆ ಅದನ್ನು ಮರುಪ್ರಕಟಿಸಲು, ಪ್ರತಿಗಳನ್ನು ಮಾಡಿ ಮಾರಲು, ರೂಪಾಂತರಗೊಳಿಸಲು, ಮಾರ್ಪಡಿಸಲು, ಪ್ರದರ್ಶಿಸಲು, ಇಲ್ಲವೇ ನಿರೂಪಿಸಲು ಕಾನೂನು ನೀಡುವ ಅನನ್ಯ ಅಧಿಕಾರ, ಇನ್ನೊಂದು ಸಾಹಿತ್ಯ ಕೃತಿಯ ಪ್ರತಿಗಳನ್ನು ಮುದ್ರಿಸಿ ಪ್ರಕಟಿಸುವ ಅನನ್ಯ ಅಧಿಕಾರ; ಕಾನೂನುಮನ್ನಿತ ಸಾಹಿತ್ಯಸ್ವಾಮ್ಯಾಧಿಕಾರ; ಕಾನೂನಿನಿಂದ ನಿಗದಿಯಾದ ಅವಧಿಯಲ್ಲಿ ಒಂದು ಸಾಹಿತ್ಯ ಅಥವಾ ಕಲಾತ್ಮಕಕೃತಿಯ ಮೇಲೆ ಅದರ ಲೇಖಕ ಅಥವಾ ಉತ್ಪಾದಕನಲ್ಲಿ ಅಥವಾ ಆ ಹಕ್ಕನ್ನು ಪಡೆದುಕೊಂಡವನಲ್ಲಿ ನಿಹಿತವಾದ ಒಡೆತನದ ಹಕ್ಕು; ಒಂದು ಕೃತಿಯ ಪ್ರತಿಗಳನ್ನು ಮಾಡುವುದಕ್ಕೆ ಅನ್ಯರೊಡನೆ ಅನುಭವಿಸುತ್ತಿರಬಹುದಾದ ಸಾಮಾನ್ಯ ಹಕ್ಕಾಗಿರದೆ ನಿರ್ಮಾತೃವಿಗೆ ಮಾತ್ರ ಇರುವ ಅನನ್ಯ ಅಧಿಕಾರ; ಒಂದು ಕೃತಿಯ ಪ್ರತಿಗಳನ್ನು ಮುದ್ರಣ ಇಲ್ಲವೆ ಇನ್ನಾವುದೇ ಉಪಾಯದಿಂದ ಹೆಚ್ಚಿಸುವ ಬಗ್ಗೆ ಏಕೈಕವಾದ ಮತ್ತು ಆ ಕೃತಿಗೆ ಸಂಬಂಧಪಟ್ಟವರಿಗೆ ಇರುವ ಅನನ್ಯ ಸ್ವಾತಂತ್ರ್ಯ-ಎಂದು ಮುಂತಾಗಿ ನ್ಯಾಯಾಧೀಶರೂ ಕಾನೂನು ಪಂಡಿತರೂ ಹೇಳಿರುವ ಅನೇಕ ವ್ಯಾಖ್ಯೆಗಳು ಅಪೂರ್ಣವಾಗಿ ಕಂಡರೂ ಕಾಲ, ದೇಶ, ಪರಿಸ್ಥಿತಿ ಮತ್ತು ಜಾರಿಯಲ್ಲಿರುವ ಕಾನೂನುಗಳಿಗೆ ಅನುಗುಣವಾಗಿ ಇವನ್ನು ಹೇಳಿರುವುದರಿಂದ ಇವು ಸಂದರ್ಭೋಚಿತವಾದುದಾಗಿದೆ. ಕಾಲಕ್ರಮದಲ್ಲಿ ಕೃತಿಸ್ವಾಮ್ಯದ ವ್ಯಾಪ್ತಿ ಬೆಳೆದಂತೆ ಅದರ ವ್ಯಾಖ್ಯೆಯೂ ವಿಸ್ತರಿಸುತ್ತ ಬಂದಿದೆ.

ಭಾರತದಲ್ಲಿ 1957ರ ಜೂನ್ 4ರಂದು ಅಂಗೀಕೃತವಾಗಿ, 1958ರ ಜನವರಿ21ರಂದು ಜಾರಿಗೆ ಬಂದ ಭಾರತದ ಕೃತಿಸ್ವಾಮ್ಯ ಕಾಯಿದೆಯಲ್ಲೂ ಕೃತಿಸ್ವಾಮ್ಯದ ವ್ಯಾಖ್ಯೆಯನ್ನು ನೀಡಲಾಗಿದೆ. ಒಂದು ಸಾಹಿತ್ಯ, ನಾಟಕ ಅಥವಾ ಸಂಗೀತಕೃತಿಯನ್ನು ಭೌತಿಕ ರೂಪದಲ್ಲಿ ಪುನರ್ರಚಿಸುವುದು, ಪ್ರಕಟಿಸುವುದು, ಬಹಿರಂಗವಾಗಿ ಪ್ರದರ್ಶಿಸುವುದು, ಅದರ ಭಾಷಾಂತರವನ್ನು ರಚಿಸುವುದು. ಚಲನಚಿತ್ರ ಇಲ್ಲವೇ ಧ್ವನಿಮುದ್ರಿಕೆ ಮಾಡುವುದು, ಬಾನುಲಿ ಪ್ರಸಾರದ ಮೂಲಕ ಶ್ರುತ ಪಡಿಸುವುದು. ಇಲ್ಲವೇ ಧ್ವನಿವರ್ಧಕ ಅಥವಾ ಅಂಥದೇ ಯಾವುದೊಂದು ಸಾಧನದ ಮೂಲಕ ಬಾನುಲಿ ಪ್ರಸಾರವನ್ನು ಜನತೆಗೆ ಮುಟ್ಟಿಸುವುದು. ಕೃತಿಯನ್ನು ಬೇಕಾದಂತೆ ರೂಪಾಂತರಿಸಿಕೊಳ್ಳುವುದು, ಈ ರೂಪಾಂತರವನ್ನು ಪುನರ್ರಚಿಸುವುದು. ಪ್ರಕಟಿಸುವುದು, ಪ್ರದರ್ಶಿಸುವುದು, ಭಾಷಾಂತರಿಸುವುದು, ಚಲನಚಿತ್ರ ಅಥವಾ ಧ್ವನಿಮುದ್ರಿಕೆ ಮಾಡುವುದು, ಬಾನುಲಿಪ್ರಸಾರ ಮಾಡುವುದು-ಮುಂತಾದ ಎಲ್ಲ ಕ್ರಮಗಳೂ ಕೃತಿಸ್ವಾಮ್ಯದಲ್ಲಿ ಸೇರಿವೆ. ಇಡೀ ಕೃತಿಗಳಿಗೇ ಅಲ್ಲದೆ ಅವುಗಳ ಯಾವುದೇ ಸಾರಭೂತ ಅಂಶಕ್ಕೆ ಸಂಬಂಧಿಸಿದಂತೆಯೂ ಇವು ಅನ್ವಯವಾಗುತ್ತವೆ.

ಕೃತಿಕಾರರು ತಮ್ಮ ಸಮಯ, ಬುದ್ಧಿ ಮತ್ತು ಹಣಗಳನ್ನು ವ್ಯಯ ಮಾಡಿ ಕೃತಿಗಳನ್ನು ರಚಿಸಿ, ಜ್ಞಾನ ಮತ್ತು ಮನೋರಂಜನೆಗಳನ್ನೊದಗಿಸಿ, ಜನತೆಗೆ ಉಪಕಾರ ಮಾಡುತ್ತಾರೆ. ಈ ಉಪಕಾರಕ್ಕೆ ಬದಲಾಗಿ ಜನತೆ ಕೃತಿಕಾರರ ಕೃತಿಸ್ವಾಮ್ಯವನ್ನು ಒಪ್ಪಿಕೊಳ್ಳುತ್ತದೆ. ಇತರರು ಅಧಿಕಾರ ಪಡೆಯದೆ ಈ ಕೃತಿಗಳ ನಕಲು ಮಾಡುವುದು ಕೃತಿಸ್ವಾಮ್ಯದ ಉಲ್ಲಂಘನೆಯೆಂದು ಸಾರಿ, ಅವರ ಹಕ್ಕುಗಳನ್ನು  ಎತ್ತಿ ಹಿಡಿಯುತ್ತದೆ. ಕೃತಿಸ್ವಾಮ್ಯ ಒಂದು ಅಭೌತಿಕ ಔದ್ಯೋಗಿಕ ಸ್ವತ್ತು. ಇದು ಕಾಯಿದೆಯ ಸೃಷ್ಟಿಯಾಗಿದ್ದರೂ ನಿಜವಾಗಿ ಸ್ವಾಭಾವಿಕವಾದ ನಾಗರಿಕ ಹಕ್ಕು. ಸಾಹಿತ್ಯ, ನಾಟಕ, ಸಂಗೀತ ಇಲ್ಲವೇ ಕಲಾಕೃತಿಯ ರಚನೆಗಾಗಿ ಕೃತಿಗಾರರು ವಿನಿಯೋಗಿಸಿದ ಶ್ರಮದ ಫಲವನ್ನು ರಕ್ಷಿಸುವುದು ಏಕಸ್ವಾಮ್ಯ. ಇದು ಕೃತಿಯ ನಕಲು ಮಾಡುವುದನ್ನು ತಡೆಯುವ ಅಧಿಕಾರಕ್ಕೆ ನಿಯಮಿತವಾಗಿರುತ್ತದೆ. ಒಬ್ಬ ಸ್ವತಂತ್ರ ಲೇಖಕ ಸ್ವತಂತ್ರೋಪಾಯಗಳಿಂದ ಈಗಾಗಲೇ ಅಸ್ತಿತ್ವದಲ್ಲಿರುವ ಕೃತಿಯಂಥದೇ ಕೃತಿಯೊಂದನ್ನು ರಚಿಸಿದ್ದಲ್ಲಿ ಮೊದಲಿನ ಕೃತಿಗಾರ ಯಾವ ಕ್ರಮವನ್ನೂ ಕೈಕೊಳ್ಳಲಾಗುವುದಿಲ್ಲ. ಹೆರವರ ವಸ್ತುಗಳನ್ನು ಅಪಹರಿಸಲಾಗದು ಎಂಬ ನ್ಯಾಯೋಕ್ತಿಯ ಮೇಲೆ ಕೃತಿಸ್ವಾಮ್ಯದ ತಳಹದಿಯಿರುತ್ತದೆ.
ಕೃತಿಸ್ವಾಮ್ಯವಿರಬೇಕಾದರೆ ಆ ಕೃತಿ ಕರ್ತೃವಿನ ಸ್ವಂತದ್ದಾಗಿರಬೇಕು. ಅದು ಅವನ ಶ್ರಮ, ಸ್ವಂತ ಬುದ್ಧಿ, ವಿವೇಕ ಮತ್ತು ಜಾಣ್ಮೆಗಳ ಫಲವಾಗಿರಬೇಕು. ಯಾವುದೇ ಒಬ್ಬ ವ್ಯಕ್ತಿಗೆ ಜ್ಞಾನ ಮತ್ತು ವಿಚಾರಗಳಲ್ಲಿ ಏಕಸ್ವಾಮ್ಯವಿರುವುದು ಅಶಕ್ತವಾದ್ದರಿಂದ ಕೇವಲ ವಿಚಾರಗಳಲ್ಲಿ ಕೃತಿಸ್ವಾಮ್ಯವಿರುವುದಿಲ್ಲ. ಒಬ್ಬ ಲೇಖಕನಿಗೆ ನೀಡಿದ ಒಂದು ವಿಚಾರವನ್ನುಪಯೋಗಿಸಿಕೊಂಡು ಆತ ಕೃತಿಯೊಂದನ್ನು ರಚಿಸಿದಲ್ಲಿ ಅದರ ಸ್ವಾಮ್ಯ ಲೇಖಕನದಾಗುವುದೇ ವಿನಾ ವಿಚಾರವನ್ನಿತ್ತವನದಾಗುವುದಿಲ್ಲ. ಯಾವ ಕೃತಿಗಳ ಬಗ್ಗೆ ಈ ಹಕ್ಕು ಇರುತ್ತದೆ ಮತ್ತು ಯಾವವುಗಳ ಬಗ್ಗೆ ಇರುವುದಿಲ್ಲ ಎಂಬುದನ್ನು 1957ರ ಕೃತಿಸ್ವಾಮ್ಯಕಾಯಿದೆಯ 43ನೆಯ ಕಲಮಿನಲ್ಲಿ ವಿವರಿಸಲಾಗಿದೆ. ಕೃತಿಯೆಂದೆನ್ನಿಸಿಕೊಳ್ಳಬಹುದಾದ ಎಲ್ಲ ಅಪ್ರಕಟಿತ ಮತ್ತು ಪ್ರಕಟಿತ ರಚನೆಗಳಲ್ಲೂ ಕೃತಿಸ್ವಾಮ್ಯ ಇರಬಹುದಾಗಿದೆ ಎಂದು ಸಾಮಾನ್ಯವಾಗಿ ಹೇಳಬಹುದು. ಒಂದು ಕೃತಿ ಸ್ವೋಪಜ್ಞವಾಗಿರತಕ್ಕದ್ದು ಕೃತಿಸ್ವಾಮ್ಯಕ್ಕೆ ಅವಶ್ಯ. ಹಾಗೆಂದರೆ ಅದು ಮೂಲಭೂತ ಇಲ್ಲವೇ ಹೊಸತಾಗಿ ಶೋಧಿಸಿದ ವಿಚಾರಗಳ ಕಥನವಾಗಿರಬೇಕು ಎಂದೇನೂ ಇಲ್ಲ. ಕೃತಿಸ್ವಾಮ್ಯ ಕಾಯಿದೆ ವಿಚಾರಗಳ ಇಲ್ಲವೇ ವಸ್ತು ವಿಷಯಕವಾದ ಸ್ವೋಪಜ್ಞತೆಯನ್ನು ಲಕ್ಷಿಸುವುದಿಲ್ಲ. ಅದು ಮಹತ್ತ್ವ ನೀಡುವುದು ನಿರೂಪಣೆಗೆ. ಕೃತಿಕಾರ ವಸ್ತುವಿಷಯದ ಮಹತ್ತರ ಭಾಗವನ್ನು ಇತರ ಮೂಲಗಳಿಂದ ಎತ್ತಿಕೊಂಡಿದ್ದರೂ ನಿರೂಪಣೆಯಲ್ಲಿ ಸ್ವೋಪಜ್ಞತೆ ಇದ್ದರೆ ಕೃತಿಸ್ವಾಮ್ಯಲಭ್ಯವಾಗುತ್ತದೆ. ಕೃತಿಸ್ವಾಮ್ಯ ಭಾಜ್ಯವಿರುವುದರಿಂದ ಕೃತಿಯ ಒಂದು ಭಾಗದ ಮೇಲೂ ಆ ಹಕ್ಕು ಇರಬಹುದಾಗಿದೆ. ಸಾಹಿತ್ಯಕೃತಿಯೆಂದರೆ ಸಾಮಾನ್ಯಭಾವನೆ ಇರುವಂತೆ ಒಂದು ಕಾದಂಬರಿಯೋ ಕಥೆಯೋ ಪದ್ಯವೋ ನಾಟಕವೋ ಆಗಿರಬೇಕೆಂದಿಲ್ಲ. ಬರೆದ ಇಲ್ಲವೇ ಮುದ್ರಿಸಿದ ಯಾವುದೇ ಆದರೂ ಇಲ್ಲಿ ಸಾಹಿತ್ಯವೆನಿಸಿಕೊಳ್ಳುತ್ತದೆ. ಪ್ರಶ್ನಪತ್ರಿಕೆಗಳು, ಶೀಘ್ರಲಿಪಿ ಪದ್ಧತಿ, ಪತ್ರಿಕಾ ತಂತಿಗಳು, ಆಟದ ನಿಯಮಗಳು ಮುಂತಾದವೂ ಸಾಹಿತ್ಯಕೃತಿಗಳೆಂದು ನಿರ್ಧರಿಸಲಾಗಿದೆ. ಸಂಗ್ರಹಗಳು, ರೂಪಾಂತರಗಳು, ಜಾಹೀರಾತುಗಳು, ಟಿಪ್ಪಣಿಗಳು, ಸಂಕಲನಗಳು, ಪಾವತಿ ಪುಸ್ತಕ, ವೈಜ್ಞಾನಿಕ ಪ್ರಶ್ನೋತ್ತರಗಳ ಪುಸ್ತಕ, ನಿರ್ದೇಶಕ ಕೈಪಿಡಿ, ಒಂದು ಕ್ರೀಡಾವಾರ್ಷಿಕದಲ್ಲಿ ಪ್ರಕಟವಾದ ಪ್ರಮುಖ ಆಟಗಾರರ ಜೀವನವೃತ್ತಾಂತದ ಟಿಪ್ಪಣಿಗಳು, ಬ್ರಾಡ್‍ಷಾ ರೈಲ್ವೆ ಮಾರ್ಗದರ್ಶಿಯಲ್ಲಿರುವ ರೈಲ್ವೆ ನಿಲ್ದಾಣಗಳ ಅನುಕ್ರಮ ಪಟ್ಟಿ. ವ್ಯಾಪಾರ ಸಂಬಂಧವಾದ ಜಾಹೀರಾತು ಮುಂತಾದುವು, ಭಾಷಾಂತರಗಳು, ಕಾಯಿದೆ ವರದಿಗಳು ಮತ್ತು ಶಿರೋಟಿಪ್ಪಣಿಗಳು, ವ್ಯಾಖ್ಯಾನಗಳು, ಪತ್ರಗಳು, ಭಾಷಣಗಳು ಮುಂತಾದವು ಸಾಹಿತ್ಯಕೃತಿಗಳೆಂದು ಪರಿಗಣಿತವಾಗಿ ಅವುಗಳಲ್ಲೂ ಕೃತಿಸ್ವಾಮ್ಯವಿರಬಹುದು. ಮಾನನಷ್ಟಕರವಾದ, ಅನೈತಿಕವಾದ, ಅಶ್ಲೀಲವಾದ, ಧರ್ಮವಿರುದ್ಧವಾದ, ಜನತೆಯನ್ನು ಮೋಸಗೊಳಿಸುವ, ಸಾರ್ವಜನಿಕ ನೀತಿಗೆ ವಿರುದ್ಧವಾದ ಅಥವಾ ದೇಶದ್ರೋಹಾತ್ಮಕವಾದ ಕೃತಿಗಳು ಸ್ವೋಪಜ್ಞವಾಗಿದ್ದರೂ ಅವುಗಳಲ್ಲಿ ಕೃತಿಸ್ವಾಮ್ಯ ಇರುವುದಿಲ್ಲ. ನಾಟಕ ಮತ್ತು ಸಂಗೀತ ಕೃತಿಗಳಲ್ಲಿ ನಾಟಕದ ಕ್ರಿಯೆ ಮತ್ತು ಮಟ್ಟುಗಳಲ್ಲಿ ಕೃತಿಸ್ವಾಮ್ಯವಿರುತ್ತದೆ. ಪಾತ್ರಗಳ ಅಭಿನಯ ಚಲನೆಗಳ ನಿರ್ದೇಶಕ ಸೂಚನೆಗಳು, ಪಾತ್ರಗಳ ಭಾಷಣಗಳು ಇಲ್ಲವೇ ಸಂವಾದಗಳು, ನಾಟಕದ ಘಟನೆಗಳು, ಕಥೆ, ಲಿಖಿತ ಅಥವಾ ಮುದ್ರಿತ ಸನ್ನಿವೇಶ ದೃಶ್ಯ ವ್ಯವಸ್ಥೆಗಳು, ನಾಟ್ಯ ಇತ್ಯಾದಿಗಳಲ್ಲಿ ಕೃತಿಸ್ವಾಮ್ಯ ಇರಬಹುದು. ನೃತ್ಯಗಳು, ದೃಶ್ಯಗಳು ಮತ್ತು ಪೋಷಾಕುಗಳು ಸ್ವತಃ ಕೃತಿಸ್ವಾಮ್ಯದ ವಿಷಯಗಳಾಗಲಾರವಾದರೂ ಅವು ಎಂತಿರಬೇಕೆಂದು ಹೇಳುವ, ಬರೆದ ಇಲ್ಲವೇ ಮುದ್ರಿಸಿದ ಭಾಗಗಳಲ್ಲಿ ಕೃತಿಸ್ವಾಮ್ಯವಿರುವುದು ಶಕ್ಯವಿದೆ. ಕೃತಿಸ್ವಾಮ್ಯಕ್ಕೆ ನಾಟಕದ ಯೋಗ್ಯತೆ ಅಪ್ರಸ್ತುತ. ಸಂಗೀತದ ಕೃತಿಯಲ್ಲಿ ಸ್ವಾಮ್ಯವಿರಬೇಕಾದರೆ ಸಂಗೀತಯೋಗ್ಯತೆ ಇರಬೇಕೆಂದಿಲ್ಲ. ವರ್ಣಚಿತ್ರಗಳು, ಶಿಲ್ಪಕೃತಿಗಳು, ರೇಖಾಕೃತಿಗಳು, ಕುಶಲ ಕೆಲಸದ ಕೃತಿಗಳು ಮುಂತಾದವುಗಳನ್ನೆಲ್ಲ, ಅವುಗಳಲ್ಲಿ ಕಲಾತ್ಮಕ ಗುಣವಿರಲಿ, ಇಲ್ಲದಿರಲಿ, ಕಲಾಕೃತಿಗಳೆಂದೇ ಪರಿಗಣಿಸಲಾಗುತ್ತದೆ. ಒಂದೇ ಮೂಲದಿಂದ ಇಬ್ಬರು ಕೃತಿಗಳನ್ನು ತಯಾರಿಸಬಹುದಾದರೂ ಒಬ್ಬನ ಕೃತಿಯನ್ನು ನೋಡಿ ಇನ್ನೊಬ್ಬ ಕೃತಿಯನ್ನು ರಚಿಸಲಾಗದು. ಒಂದೇ ವಸ್ತುವನ್ನು ಕುರಿತು ಎರಡು ಛಾಯಾಚಿತ್ರಗಳಿದ್ದರೆ ಅವುಗಳೆರಡರಲ್ಲೂ ಪ್ರತ್ಯೇಕವಾಗಿ ಕೃತಿಸ್ವಾಮ್ಯವಿರಬಹುದು. ಕರಡು ಚಿತ್ರಗಳೂ ನಕ್ಷೆಗಳೂ ಕೃತಿಸ್ವಾಮ್ಯಕ್ಕೆ ಅರ್ಹವಾಗುವುದಾದರೂ ಅವುಗಳ ಆಧಾರದ ಮೇಲೆ ಕಟ್ಟಲಾದ ಇಮಾರತುಗಳಲ್ಲಿ ಕಲಾತ್ಮಕ ಗುಣವಿದ್ದರೆ ಮಾತ್ರ ಅವುಗಳಲ್ಲೂ ಕೃತಿಸ್ವಾಮ್ಯ ಇರಬಹುದು. ಚಲನಚಿತ್ರದಲ್ಲಿ ಸಾಹಿತ್ಯ, ನಾಟಕ ಮತ್ತು ಸಂಗೀತ ಕೃತಿಸ್ವಾಮ್ಯಗಳ ವಿಷಯಗಳು ಒಂದುಗೂಡಿರುತ್ತವೆ. ಛಾಯಾಚಿತ್ರವೆಂಬ ಕಾರಣದಿಂದ ಒಂದು ಚಲನಚಿತ್ರಕ್ಕೆ ಕೃತಿಸ್ವಾಮ್ಯದ ಅರ್ಹತೆ ಲಭ್ಯವಾಗುವುದು. ಕೃತಿಸ್ವಾಮ್ಯವಿರುವ ಇನ್ನೊಂದು ಕೃತಿಯಿಂದ ಒಂದು ಚಲನಚಿತ್ರ ರಚಿತವಾಗಿದ್ದರೂ ಅದರ ಕರ್ತೃ ಅದಕ್ಕೆ ಸ್ವೋಪಜ್ಞತೆಯ ಲಕ್ಷಣ ನೀಡಿದ ಪಕ್ಷದಲ್ಲಿ ಅದು ಮೂಲಕೃತಿಯೆನಿಸಿಕೊಂಡು, ಅದರಲ್ಲಿ ಕೃತಿಸ್ವಾಮ್ಯ ಇರಬಹುದು. ಧ್ವನಿಮುದ್ರಿಕೆಯಲ್ಲಿ ಸ್ವಾಮ್ಯವಿರಬೇಕಾದರೆ ಅದರ ರಚನೆ ಕಾನೂನಿನ ಮಿತಿಯಲ್ಲಿ ಬರಬೇಕು. ಭವಿಷ್ಯದ ಕೃತಿಗಳಲ್ಲಿ ಈಗ ಕೃತಿಸ್ವಾಮ್ಯ ಇರುವುದಿಲ್ಲ.

ಸ್ವಾಮ್ಯದ ಹಕ್ಕುದಾರ : ಒಂದು ಕೃತಿಯ ಮೊತ್ತಮೊದಲಿನ ಹಕ್ಕುದಾರ ಕೃತಿಕಾರ. ಒಂದು ವೃತ್ತಪತ್ರಿಕೆ ಅಥವಾ ನಿಯತಕಾಲಿಕವೊಂದರ ಒಡೆಯನಲ್ಲಿ ಒಪ್ಪಂದದ ಪ್ರಕಾರ ಉದ್ಯೋಗಿಯಾಗಿರುವವನು, ವಿರುದ್ಧ ಒಪ್ಪಂದವಾವುದೂ ಇಲ್ಲದಿದ್ದಲ್ಲಿ, ಬರೆದ ಲೇಖನವನ್ನು ಪ್ರಕಟಿಸುವ ಪುನರ್ಮುದ್ರಿಸುವ ಪ್ರಥಮ ಹಕ್ಕು ಯಜಮಾನನದು. ಉಳಿದೆಲ್ಲ ವಿಚಾರಗಳಲ್ಲಿ ಕೃತಿಕಾರನದೇ ಮೊದಲ ಸ್ವಾಮ್ಯ. ಪ್ರತಿಫಲಕ್ಕಾಗಿ ಒಬ್ಬ ಇನ್ನೊಬ್ಬನಿಗಾಗಿ ಒಂದು ಕಲಾಕೃತಿ ರಚಿಸಿದರೆ, ಸಾಮಾನ್ಯವಾಗಿ ಅದರ ಒಡೆತನ ಪ್ರತಿಫಲ ನೀಡಿದಾತನದು. ಸ್ವಾಮ್ಯದ ಮೊದಲಿನ ಹಕ್ಕುದಾರ ಪ್ರೇರಣೆಯಿತ್ತವನಾಗುತ್ತಾನೆ. ಸರ್ಕಾರದ ಕೃತಿಯನ್ನು ಯಾರೇ ರಚಿಸಲಿ,  ಸಾಮಾನ್ಯವಾಗಿ ಅದರ ಒಡೆತನ ಸರ್ಕಾರದ್ದು.

ಕೃತಿಸ್ವಾಮ್ಯದ ಅವಧಿ: ಒಂದು ಕೃತಿ ಅದರ ಕೃತಿಕಾರ ಬದುಕಿದ್ದಾಗ ಪ್ರಕಟವಾಗಿದ್ದರೆ, ಕೃತಿಕಾರ ತೀರಿಕೊಂಡ ವರ್ಷದ ಅನಂತರದ ಪಂಚಾಂಗ ವರ್ಷದ ಸಂಯುಕ್ತ ಆದಿಯಿಂದ 50 ವರ್ಷಗಳ ಕಾಲ ಅದರ ಸ್ವಾಮ್ಯ ಇರುತ್ತದೆ. ಸಂಯುಕ್ತ ಕರ್ತೃತ್ವದ ಕೃತಿಯಾಗಿದ್ದರೆ, ಕೃತಿಕಾರರ ಪೈಕಿ ಕೊನೆಯಲ್ಲಿ ಮೃತಿ ಹೊಂದಿದವನ ಮರಣದ ಮುಂದಿನ ಪಂಚಾಂಗ ವರ್ಷದ ಆದಿಯಿಂದ 50 ವರ್ಷಗಳ ವರೆಗೆ ಸ್ವಾಮ್ಯ ಇರುತ್ತದೆ. ಕೃತಿ ಛಾಯಾಚಿತ್ರವಾಗಿದ್ದರೆ ಅದರಲ್ಲಿ ಸ್ವಾಮ್ಯ ಅದು ಪ್ರಕಟವಾದ ವರ್ಷದ ಅನಂತರದ ವರ್ಷದ ಆದಿಯಿಂದ 50 ವರ್ಷಗಳ ವರೆಗೆ ಉಳಿಯುತ್ತದೆ. ಕೃತಿ ಚಲನಚಿತ್ರ ಇಲ್ಲವೇ ಧ್ವನಿಮುದ್ರಿಕೆ ಆಗಿದ್ದರೆ ಅದು ಪ್ರಕಟವಾದ ವರ್ಷದ ಅನಂತರದ ವರ್ಷದ ಆದಿಯಿಂದ 50 ವರ್ಷಗಳ ವರೆಗೆ ಅದರಲ್ಲಿ ಸ್ವಾಮ್ಯ ಇರುತ್ತದೆ.  ಸರ್ಕಾರಿ ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳ ಕೃತಿಗಳಲ್ಲಿ ಸ್ವಾಮ್ಯ ಅವು ಪ್ರಕಟವಾದ ವರ್ಷದ ಅನಂತರದ ವರ್ಷದ ಆದಿಯಿಂದ 50 ವರ್ಷಗಳ ತನಕ ಉಳಿಯುತ್ತದೆ. ಹೆಸರಿಲ್ಲದೆ, ಇಲ್ಲವೇ ಗುಪ್ತನಾಮದಲ್ಲಿ ಒಂದು ಕೃತಿ ಪ್ರಕಟವಾಗಿದ್ದರೆ ಅದು ಪ್ರಕಟವಾದ ವರ್ಷದ ಅನಂತರದ ವರ್ಷದ ಆದಿಯಿಂದ 50 ವರ್ಷಗಳ ವರೆಗೆ ಸ್ವಾಮ್ಯ ಇರುತ್ತದೆ. ಆದರೆ ಈ ಅವಧಿ ಮುಗಿಯುವ ಮೊದಲೇ ಕೃತಿಕಾರನಾರು ಎಂಬುದು ತಿಳಿದುಬಂದಲ್ಲಿ ಹಾಗೆ ತಿಳಿದುಬಂದ ವರ್ಷದ ಅನಂತರದ ವರ್ಷದ ಆದಿಯಿಂದ 50 ವರ್ಷಗಳವರೆಗೆ ಕೃತಿಯಲ್ಲಿ ಸ್ವಾಮ್ಯ ಉಳಿಯುತ್ತದೆ. ಒಂದು ಸಾಹಿತ್ಯ, ನಾಟಕ, ಸಂಗೀತ ಇಲ್ಲವೇ ಕಲಾತ್ಮಕ ಕೃತಿಯಲ್ಲಿ ಅದರ ರಚಕನಿಗೆ ಸ್ವಾಮ್ಯವಿದ್ದು, ಅವನು ಜೀವಂತವಿರುವಾಗ ಕೃತಿ ಪ್ರಕಟವಾಗದಿದ್ದಲ್ಲಿ ಅದು ಪ್ರಕಟವಾದ ವರ್ಷದ ಅನಂತರದ ವರ್ಷದ ಆದಿಯಿಂದ 50 ವರ್ಷಗಳ ವರೆಗೆ ಸ್ವಾಮ್ಯ ಉಳಿಯುತ್ತದೆ.

ಈಗಾಗಲೇ ಅಸ್ತಿತ್ವದಲ್ಲಿರುವ, ಇಲ್ಲವೆ ಇನ್ನುಮೇಲೆ ಅಸ್ತಿತ್ವದಲ್ಲಿ ಬರಲಿರುವ ಒಂದು ಕೃತಿಯ ಸ್ವಾಮ್ಯವನ್ನು ಪೂರ್ಣವಾಗಿ ಇಲ್ಲವೇ ಭಾಗಶಃವಾಗಿ ಪೂರ್ಣ ಅವಧಿಯವರೆಗೆ ಇಲ್ಲವೆ ನಿಶ್ಚಿತ ಅವಧಿಯವರೆಗೆ ಸಾಮಾನ್ಯವಾಗಿ ಪರಭಾರೆ ಮಾಡಬಹುದಾಗಿದೆ. ಮುಂದೆ ಅಸ್ತಿತ್ವದಲ್ಲಿ ಬರಲಿರುವ ಕೃತಿಯ ಪರಭಾರೆ, ಕೃತಿ ಅಸ್ತಿತ್ವದಲ್ಲಿ ಬಂದಾಗಿನಿಂದ ಜಾರಿಯಲ್ಲಿ ಬರುವುದು. ಕೃತಿಕಾರ ತನ್ನ ಕೃತಿಯಲ್ಲಿರುವ ಪೂರ್ಣಸ್ವಾಮ್ಯವನ್ನು, ಇಲ್ಲವೇ ಅದರ ಭಾಗವನ್ನು ಕೃತಿಸ್ವಾಮ್ಯ ರಿಜಿಸ್ಟ್ರಾರನಿಗೆ ತಿಳಿವಳಿಕೆ ನೀಡಿ ತ್ಯಜಿಸಬಹುದು.
1957ರ ಕೃತಿಸ್ವಾಮ್ಯ ಕಾಯಿದೆಯ 14ನೆಯ ಕಲಮಿನಲ್ಲಿರುವ ಕೃತಿಸ್ವಾಮ್ಯದ ವ್ಯಾಖ್ಯೆಯಿಂದ ಕೃತಿಕಾರ ತನ್ನ ಕೃತಿಯ ಸಂಬಂಧದಲ್ಲಿ ಮಾಡಬಹುದಾದ ಕೃತ್ಯಗಳನ್ನು ಅರಿಯಬಹುದಾಗಿದೆ. ಒಬ್ಬ ವ್ಯಕ್ತಿ ಕೃತಿಕಾರನಿಂದ ಇಲ್ಲವೇ ಕಾಪಿರೈಟ್ ರೆಜಿಸ್ಟ್ರಾರನಿಂದ ಅಪ್ಪಣೆಪತ್ರ ಪಡೆಯದೆ ಇಲ್ಲವೇ ಪಡೆದುಕೊಂಡ ಅಪ್ಪಣೆಯ ಷರತ್ತುಗಳಿಗೆ ವಿರುದ್ಧವಾಗಿ, ಕೃತಿಕಾರ ಮಾತ್ರ ಕಾಯಿದೆಯ ಪ್ರಕಾರ ಮಾಡಬಹುದಾದ ಕೃತ್ಯಗಳನ್ನು ತಾನೇ ಮಾಡಿದ್ದಾದರೆ, ಕೃತಿಸ್ವಾಮ್ಯಕ್ಕೆ ಚ್ಯುತಿ ಬರುವಂತೆ ಕೃತಿಯನ್ನು ವಿಕ್ರಯಕ್ಕೊ ಬಾಡಿಗೆಗೊ ತಯಾರು ಮಾಡಿದರೆ ಅಥವಾ ಕೊಟ್ಟರೆ ಅಥವಾ ಕೊಡುವುದಕ್ಕೆ ಮುಂದೆ ಬಂದರೆ ಅದು ಉಲ್ಲಂಘನೆಯೆನಿಸುತ್ತದೆ. ವ್ಯಾಪಾರಕ್ಕಾಗಿ ಅದನ್ನು ಬಹಿರಂಗವಾಗಿ ಪ್ರದರ್ಶಿಸಿದರೆ ಅಥವಾ ತನ್ನ ಉಪಯೋಗಕ್ಕಲ್ಲದೆ ಬೇರೆಯವರಿಗೆ ಸಾದರುಪಡಿಸಿದರೆ ಅದು ಕೃತಿಸ್ವಾಮ್ಯದ ಉಲ್ಲಂಘನೆ.

ಕೃತಿಸ್ವಾಮ್ಯದ ಇತಿಹಾಸ :  ಭಾರತದಲ್ಲಿ ಈಸ್ಟ್ ಇಂಡಿಯ ಕಂಪನಿಯ ಆಡಳಿತ ಪ್ರಾರಂಭವಾಗುವ ಮೊದಲು ಕೃತಿಸ್ವಾಮ್ಯಕ್ಕೆ ಮನ್ನಣೆ ಇತ್ತೇ? ಇದ್ದುದಾದರೆ ಯಾವ ರೂಪದಲ್ಲಿ ಇತ್ತು ಎಂದು ಅರಿತುಕೊಳ್ಳುವುದಕ್ಕೆ ನಂಬಲರ್ಹವಾದ ಆಧಾರವಾವುದೂ ಇದ್ದಂತೆ ಕಾಣುವುದಿಲ್ಲ. ಬಹುಶಃ ಕೃತಿಸ್ವಾಮ್ಯದ ಸಂಬಂಧದಲ್ಲಿ ವ್ಯಾಜ್ಯಗಳು ಎದ್ದಿದ್ದರೆ ಅವನ್ನು ಉಳಿದ ವ್ಯಾಜ್ಯಗಳಂತೆ ದೇಶದ ಸಂಪ್ರದಾಯನ್ಯಾಯಕ್ಕೆ ಅನುಸಾರವಾಗಿ ಬಗೆಹರಿಸುತ್ತಿದ್ದಿರಬೇಕು. ಈಸ್ಟ್ ಇಂಡಿಯ ಕಂಪನಿಯ ಆಡಳಿತ ಪ್ರಾರಂಭವಾದಂದಿನಿಂದ ಬ್ರಿಟಿಷ್ ಕಾಯಿದೆಗಳನ್ನು ಸ್ಥಳೀಯ ಪರಿಸ್ಥಿತಿಗಳಿಗೆ ತಕ್ಕಂತೆ ಮಾರ್ಪಡಿಸಿ ಭಾರತಕ್ಕೆ ಅನ್ವಯಿಸಲಾಗುತ್ತಿತ್ತು. ಅಂದಿನಿಂದ ಭಾರತದಲ್ಲಿ ಕೃತಿಸ್ವಾಮ್ಯದ ಸ್ವರೂಪ ಮತ್ತು ಕಾಯಿದೆಗಳು ಅದು ಸ್ವತಂತ್ರವಾಗುವ ತನಕವೂ ಇಂಗ್ಲೆಂಡಿನಲ್ಲಿದ್ದಂತೆಯೇ ಇದ್ದುವು. ಇಂಗ್ಲೆಂಡಿನಲ್ಲಿ ಕೃತಿಸ್ವಾಮ್ಯದ ಸಮಗ್ರ ಕಾಯಿದೆ ಮೊತ್ತಮೊದಲಿಗೆ 1911ರಲ್ಲಿ ಜಾರಿಗೆ ಬಂತು. ಸಂಪ್ರದಾಯನ್ಯಾಯದ ನಾನಾವಿಧಿಗಳನ್ನು ಇದು ರದ್ದು ಮಾಡಿತಲ್ಲದೆ ಕೃತಿಸ್ವಾಮ್ಯಕ್ಕೆ ಕೃತಿರಚನೆಯಷ್ಟೇ ಸಾಕೆಂದೂ ಹಿಂದಿನಂತೆ ಸ್ಟೇಷನರ್ಸ್ ಭವನದಲ್ಲಿ ಅದರ ನೋಂದಣಿಯ ಅಗತ್ಯವಿಲ್ಲವೆಂದೂ ಹೇಳಿತು. 1956ರ ಕಾಯಿದೆ ಹಿಂದಿನ ಕಾಯಿದೆಯ ಅನೇಕ ವಿಧಿಗಳನ್ನು ಪುನರ್ವಿಧಾಯಕ ಮಾಡಿತಲ್ಲದೆ, ಚಲನಚಿತ್ರ, ಫಿಲಂ, ಟೆಲಿವಿಷನ್, ಧ್ವನಿಪ್ರಸಾರ ಮುಂತಾದವನ್ನೂ ಕೃತಿಸ್ವಾಮ್ಯದ ವ್ಯಾಪ್ತಿಯೊಳಕ್ಕೆ ತಂದಿತು. ಭಾರತದಲ್ಲಿ ಜಾರಿಗೆ ಬಂದ 1911ರ ಕೃತಿಸ್ವಾಮ್ಯ ಕಾಯಿದೆ 1914ರಲ್ಲಿ ಮಾರ್ಪಾಟಾಯಿತು: 1957ರ ವರೆಗೂ ಜಾರಿಯಲ್ಲಿತ್ತು. ಆಗ ಹೊಸ ಕಾಯಿದೆಯೊಂದು ಅಂಗೀಕೃತವಾಗಿ ಅದು ಮರುವರ್ಷ ಜಾರಿಗೆ ಬಂತು. ಅದು ಹೆಚ್ಚು ವ್ಯಾಪಕವಾದ್ದು. ನಾಟಕ, ಸಂಗೀತ ಮತ್ತು ಕಲಾಕೃತಿಗಳಿಗೆ ಆಗಲೇ ಇದ್ದ ರಕ್ಷಣೆಯನ್ನು ಮುಂದುವರಿಸಿದ್ದಲ್ಲದೆ, ಚಲನಚಿತ್ರಗಳಿಗೂ ಬಾನುಲಿ ಪ್ರಸಾರಗಳಿಗೂ ರಕ್ಷಣೆಯನ್ನು ನೀಡಲಾಯಿತು. ಇದಲ್ಲದೆ ಕೃತಿಸ್ವಾಮ್ಯದ ಐಚ್ಛಿಕ ನೋಂದಣಿಗಾಗಿ ಕೃತಿಸ್ವಾಮ್ಯ ರೆಜಿಸ್ಟ್ರಾರನ ನೇಮಕವೂ, ಕಡ್ಡಾಯದ ಲೈಸನ್ನುಗಳನ್ನು ಕೊಡುವುದಕ್ಕೂ ಕೆಲವು ಸಂದರ್ಭಗಳಲ್ಲಿ ಕೃತಿಗಳ ಭಾಷಾಂತರಗಳನ್ನು ಮಾಡುವ ಹಕ್ಕುಗಳನ್ನು ಕೊಡುವುದಕ್ಕೂ ಅಧಿಕಾರವುಳ್ಳ ಕೃತಿಸ್ವಾಮ್ಯ ಬೋರ್ಡಿನ ನೇಮಕವೂ ಈ ಕಾಯಿದೆಯ ನಾವೀನ್ಯಗಳಾಗಿವೆ. ಹೊಸ ಕಾಯಿದೆ ಮೊದಲಿದ್ದ ಹಕ್ಕುಗಳಿಗೆ ಬಾಧೆ ತರುವುದಿಲ್ಲ. ಅದರಲ್ಲಿ ಕೃತಿಗಳ ನೋಂದಣಿಗೆ ಅವಕಾಶವಿದೆಯಾದರೂ ನೋಂದಣಿ ಕೇವಲ ಐಚ್ಛಿಕವಾಗಿದೆ. ಏಕೆಂದರೆ ಕೃತಿಸ್ವಾಮ್ಯ ಕೃತಿಕಾರನಲ್ಲಿ ನಿಹಿತಿವಾಗಿದೆಯೇ ಹೊರತು ಅದು ಬರೀ ಕಾಯಿದೆಯಿಂದ ಜನಿತವಾಗುವುದಿಲ್ಲ. ಕೃತಿಯನ್ನು ನೋಂದಣಿ ಮಾಡಿಸದಿದ್ದಲ್ಲಿ ಕೃತಿಸ್ವಾಮ್ಯದ ಸಂಬಂಧದಲ್ಲಿ ಏನಾದರೂ ವ್ಯಾಜ್ಯ ಬಂದಲ್ಲಿ ಕೃತಿ ತನ್ನ ಸ್ವಂತದ್ದು ಎಂಬುದನ್ನು ಸಿದ್ಧಮಾಡಿತೋರಿಸುವ ಭಾರ ಕೃತಿಕಾರನ ಮೇಲೆ ಇರುತ್ತದೆ. ಪ್ರದರ್ಶನ ಹಕ್ಕುಗಳ ಸಂಘ, ಬಾನುಲಿ ಪ್ರಸಾರ ಸಂಘ-ಇವುಗಳ ಹಕ್ಕುಬಾಧ್ಯತೆಗಳನ್ನೂ ಕಾಯಿದೆಯಲ್ಲಿ ವಿವರಿಸಲಾಗಿದೆ.
ಇಂಗ್ಲೆಂಡಿನಲ್ಲಿ 1956ರ ಕಾಯಿದೆಯ ಪ್ರಕಾರ ಸಾಹಿತ್ಯ, ನಾಟಕ, ಸಂಗೀತ ಮತ್ತು ಕಲಾಕೃತಿಗಳ, ಧ್ವನಿಮುದ್ರಣಗಳ, ಚಲನಚಿತ್ರಗಳ, ಟೆಲಿವಿಷನ್ ಮತ್ತು ಬಾನುಲಿ ಪ್ರಸಾರಗಳ ರಕ್ಷಣೆಗೆ ಅವಕಾಶವನ್ನೀಯಲಾಗಿದೆ. ಟೆಲಿವಿಷನ್ ಮತ್ತು ಪ್ರಸಾರಗಳ ಧ್ವನಿಮುದ್ರಿಕೆಗಳ ಬಹಿರಂಗ ಪ್ರದರ್ಶನ ಮಾಡುವುದಕ್ಕಾಗಿ ಲೈಸೆನ್ಸ್ ಪಡೆಯಲಿಚ್ಛಿಸುವವರ ಮತ್ತು ಕೃತಿಸ್ವಾಮ್ಯದ ಹಕ್ಕುದಾರರ ನಡುವೆ ವ್ಯಾಜ್ಯಗಳುಂಟಾದಲ್ಲಿ ಅವನ್ನು ಬಗೆಹರಿಸುವುದಕ್ಕೆ ಒಂದು ಟ್ರಿಬ್ಯೂನಲ್ ಸ್ಥಾಪಿತವಾಗಿದೆ. ಧ್ವನಿ ಮತ್ತು ಟೆಲಿವಿಷನ್ ಪ್ರಸಾರಗಳ ನಕಲು ಮಾಡುವುದನ್ನು ತಡೆಯುವ ಹಕ್ಕು ಅಸ್ತಿತ್ವದಲ್ಲಿ ಬಂದಿದೆ. ಟೆಲಿವಿಷನ್ ಪ್ರಸಾರಗಳಲ್ಲಿ ಪ್ರದರ್ಶಿಸುವ ಹಕ್ಕಿಗೂ ಮನ್ನಣೆಯನ್ನೀಯಲಾಗಿದೆ.

ಅಮೆರಿಕದ 1947ರ ಕೃತಿಸ್ವಾಮ್ಯ ಸಂಹಿತೆಯಲ್ಲಿ ಗ್ರಂಥಗಳು, ನಿಯತಕಾಲಿಕಗಳು, ಕರಡುಗಳು, ನಾಟಕ ಮತ್ತು ಸಂಗೀತ ರಚನೆಗಳು, ನಕಾಸೆಗಳು, ಕಲಾಕೃತಿಗಳು, ಕಲಾಕೃತಿಗಳ ಮರುರಚನೆಗಳು, ವೈಜ್ಞಾನಿಕ ಇಲ್ಲವೇ ತಾಂತ್ರಿಕ ನಕ್ಷೆಗಳು ಇಲ್ಲವೇ ಪ್ಲಾಸ್ಟಿಕ್ ಕೃತಿಗಳು, ಛಾಯಾಚಿತ್ರಗಳು, ಮುದ್ರಣಗಳು, ಚಿತ್ರನಿರೂಪಣೆಗಳು ಮುಂತಾದ, ಕೃತಿಕಾರನ ಎಲ್ಲ ಕೃತಿಗಳ ರಕ್ಷಣೆಗೆ ಅವಕಾಶವಿದೆ. ಕೃತಿಸ್ವಾಮ್ಯದ ಹಕ್ಕುದಾರನಿಗೆ ಕೃತಿಯ ಪ್ರತಿಗಳನ್ನು ಮಾಡುವ, ಭಾಷಾಂತರ ಇಲ್ಲವೇ ಇತರ ರೂಪಾಂತರಗಳನ್ನು ರಚಿಸುವ, ನಾಟಕರೂಪದಲ್ಲಿಲ್ಲದ ಕೃತಿಯನ್ನು ನಾಟಕಕೃತಿಯನ್ನಾಗಿ ಇಲ್ಲವೇ ನಾಟಕಕೃತಿಯನ್ನು ಬೇರೆ ಬಗೆಯ ಕೃತಿಯನ್ನಾಗಿ ಮಾರ್ಪಡಿಸುವ, ಸಂಗೀತದ ಕೃತಿಗಳನ್ನು ವ್ಯವಸ್ಥೆಗೊಳಿಸುವ ಇಲ್ಲವೇ ಅವನ್ನು ರೂಪಾಂತರಿಸುವ, ನಾಟಕಕೃತಿಯನ್ನು ಪ್ರದರ್ಶಿಸುವ, ಸಾಹಿತ್ಯ ಇಲ್ಲವೇ ಸಂಗೀತಕೃತಿಯನ್ನು ಪ್ರತಿಫಲಕ್ಕಾಗಿ ಬಹಿರಂಗವಾಗಿ ಪ್ರದರ್ಶಿಸುವ ಇಲ್ಲವೇ ಅದರ ಧ್ವನಿಮುದ್ರಿಕೆಯನ್ನು ರಚಿಸುವ ಅನನ್ಯ ಅಧಿಕಾರವಿದೆ. ಕೃತಿಸ್ವಾಮ್ಯದ ಹಕ್ಕುದಾರ ಸಂಗೀತಕೃತಿಯ ಯಾಂತ್ರಿಕ ಪುನರುತ್ಪಾದನ ಅಥವಾ ಧ್ವನಿಮುದ್ರಿಕೆ ರಚಿಸಿದಲ್ಲಿ, ಇಲ್ಲವೇ ರಚಿಸುವ ಅಧಿಕಾರವನ್ನಿತ್ತಲ್ಲಿ ಬೇರೊಬ್ಬನೂ ನಿಶ್ಚಿತವಾದ ಗೌರವಧನವನ್ನು ಕೊಟ್ಟು ಆ ಕೃತಿಯ ಅಂಥದೇ ಉಪಯೋಗ ಮಾಡಬಹುದು. ಅಪ್ರಕಟಿತ ಕೃತಿಗಳಿಗೆ ಸಂಪ್ರದಾಯನ್ಯಾಯದ ಪ್ರಕಾರ ಅನಿಶ್ಚಿತ ಅವಧಿಯ ವರೆಗೆ ರಕ್ಷಣೆಯಿದೆ. ಸಾಮಾನ್ಯವಾಗಿ ಪ್ರದರ್ಶಿಸುವುದಕ್ಕೆ ರಚಿಸಲಾಗುವ ನಾಟಕ, ಸಂಗೀತ ಇಲ್ಲವೇ ಕಲಾಕೃತಿಗಳಂಥ ರಚನೆಗಳು ಅಪ್ರಕಟಿತವಿದ್ದಲ್ಲಿ ಕೃತಿಸ್ವಾಮ್ಯ ಕಚೇರಿಯಲ್ಲಿ ನೋಂದಣಿ ಮಾಡಿಸಿ ಅವಕ್ಕೆ ಕೃತಿ ಸ್ವಾಮ್ಯ ಕಾಯಿದೆಯ ರಕ್ಷಣೆಯನ್ನು ದೊರಕಿಸಬಹುದು. ಕಾಯಿದೆಯ ಪ್ರಕಾರ ಅಗತ್ಯವಾದ ತಿಳಿವಳಿಕೆ ನೀಡಿ ಕೃತಿಯನ್ನು ಪ್ರಕಟಿಸುವುದರ ಮೂಲಕ ಸ್ವಾಮ್ಯ ಪಡೆಯಬಹುದು. ಅಮೆರಿಕದಲ್ಲಿ ಪ್ರಕಟಿತವಾದ ಕೃತಿಯ ಪ್ರತಿಯೊಂದು ಪ್ರತಿಯಲ್ಲೂ ಈ ಸೂಚನೆ ಅಥವಾ ತಿಳಿವಳಿಕೆ ಇರಬೇಕಾಗುತ್ತದೆ. ಇದಿಲ್ಲದೆ ಪ್ರಕಟವಾದ ಕೃತಿ ಸಾರ್ವಜನಿಕ ಕ್ಷೇತ್ರಕ್ಕೆ ಸೇರುತ್ತದೆ.

ಕೃತಿಕಾರರಿಗೆ ಅವರವರ ರಾಷ್ಟ್ರಗಳಷ್ಟೇ ಅಲ್ಲದೆ ಪರರಾಷ್ಟ್ರಗಳಲ್ಲಿ ಕೂಡ ಕೃತಿಗಳನ್ನು ನಕಲು ಮಾಡುವವರಿಂದ ರಕ್ಷಣೆ ದೊರೆಯಬೇಕೆನ್ನುವುದು ನ್ಯಾಯಸಮ್ಮತವಾದ್ದು. ಇಂಥ ರಕ್ಷಣೆಯನ್ನು ದೊರಕಿಸಿಕೊಡುವ ಮತ್ತು ಕೃತಿಕಾರರಿಗೆ ಬೇರೆಬೇರೆ ರಾಷ್ಟ್ರಗಳಲ್ಲಿ ಇರಬಹುದಾದ ಹಕ್ಕುಗಳಲ್ಲಿ ಏಕರೂಪತೆಯಿರುವಂತೆ ಮಾಡುವ ಉದ್ದೇಶದಿಂದ 1885ರಲ್ಲಿ ಕೆಲವು ಪ್ರಮುಖ ರಾಷ್ಟ್ರಗಳು ಸೇರಿ ಸಂಘವೊಂದನ್ನು ಮಾಡಿಕೊಂಡು 1886ರಲ್ಲಿ ಒಡಂಬಡಿಕೆಯೊಂದಕ್ಕೆ ಸಹಿ ಹಾಕಿದುವು. ಈ ಒಡಂಬಡಿಕೆ ಬೆರ್ನ್ ಒಡಂಬಡಿಕೆಯೆಂದು ಪ್ರಸಿದ್ಧವಾಗಿದೆ. ಕೃತಿಕಾರನಿಗೆ ಹೆಚ್ಚಿನÀ ರಕ್ಷಣೆ ದೊರಕಿಸಿಕೊಡುವುದಕ್ಕೆ ಮತ್ತು ಇದ್ದ ಒಡಂಬಡಿಕೆಯ ಆಚರಣೆಯಲ್ಲಿ ಬರುವ ತೊಡಕುಗಳನ್ನು ನಿವಾರಿಸುವುದಕ್ಕೆ 1908ರಲ್ಲಿ ಈ ಒಡಂಬಡಿಕೆಗೆ ಬರ್ಲಿನ್ ಸಮಾವೇಶದಲ್ಲಿ ತಿದ್ದುಪಡಿ ಮಾಡಲಾಯಿತು. 1928ರಲ್ಲಿ ರೋಮಿನಲ್ಲೂ 1948ರಲ್ಲಿ ಬ್ರಸಲ್ಸಿನಲ್ಲೂ ಮತ್ತೆ ತಿದ್ದುಪಡಿಗಳಾದುವು. ಸಂಘದ ಒಂದು ಸದಸ್ಯ ದೇಶದ ಕೃತಿಕಾರರಿಗೆ ಇಲ್ಲವೇ ಅವರ ಪ್ರತಿನಿಧಿಗಳಿಗೆ ಮೊತ್ತಮೊದಲಿಗೆ ಪ್ರಕಟವಾದ ಇಲ್ಲವೇ ಅಪ್ರಕಟಿತ ಕೃತಿಗಳಲ್ಲಿ ಅವರ ಸ್ವಂತ ದೇಶಗಳಲ್ಲಿ ಈಗಾಗಲೇ ಇರುವ ಮತ್ತು ಮುಂದೆ ಅಸ್ತಿತ್ವದಲ್ಲಿ ಬರಲಿರುವ ಹಕ್ಕುಗಳು ಉಳಿದ ಸದಸ್ಯದೇಶಗಳಲ್ಲೂ ದೊರೆಯುವಂತೆ ಮಾಡುವುದೇ ಬೆರ್ನ್ ಒಡಂಬಡಿಕೆಯ ಮುಖ್ಯ ಉದ್ದೇಶವಾಗಿತ್ತು. ರೋಂ ಒಡಂಬಡಿಕೆಯ 4ನೆಯ ನಿಬಂಧನೆಯಲ್ಲಿ, ಸಂಘದ ಯಾವುದೊಂದು ಸದಸ್ಯದೇಶದ ಪ್ರಜೆಗಳಾದ ಕೃತಿಕಾರರ ಕೃತಿಗಳ ಮೂಲದೇಶದ ಹೊರತಾಗಿ ಉಳಿದ ದೇಶಗಳಲ್ಲಿ ಅವರ ಕೃತಿಗಳು ಅಪ್ರಕಟಿತವಿರಲಿ ಇಲ್ಲವೇ ಯಾವುದೊಂದು ಸದಸ್ಯದೇಶದಲ್ಲಿ ಮೊದಲ ಬಾರಿಗೆ ಪ್ರಕಟಿತವಾಗಿರಲಿ, ಆ ದೇಶಗಳು ತಮ್ಮ ಮೂಲನಿವಾಸಿಗಳಿಗೆ ಈಗಾಗಲೇ ನೀಡುತ್ತಿರುವ ಮತ್ತು ಮುಂದೆ ನೀಡಲಿರುವ ಹಕ್ಕುಗಳಿಗೆ ಹಾಗೂ ಈ ಒಡಂಬಡಿಕೆ ಪ್ರತ್ಯೇಕವಾಗಿ ನೀಡುವ ಹಕ್ಕುಗಳಿಗೆ ಅವರೂ ಅರ್ಹರು-ಎಂದು ಹೇಳಲಾಗಿದೆ. ಇದೇ ಒಕ್ಕಣೆ ಬ್ರಸಲ್ಸ್ ಒಡಂಬಡಿಕೆಯಲ್ಲೂ ಕಂಡುಬರುತ್ತದೆ. ಕೃತಿಯ ಮೂಲದೇಶವೆಂದರೆ  ಅದು ಮೊತ್ತಮೊದಲು ಪ್ರಕಟವಾದ ದೇಶ ಇಲ್ಲವೇ ಅದು ಅಪ್ರಕಟಿತವಿದ್ದಲ್ಲಿ ಕೃತಿಕಾರನ ದೇಶ. ಸಂಘದ ಸದಸ್ಯದೇಶವೊಂದರ ಪ್ರಜೆಗಳಾದ ಕೃತಿಕಾರರು ಇನ್ನೊಂದು ಸದಸ್ಯದೇಶದಲ್ಲಿ ತಮ್ಮ ಕೃತಿಗಳನ್ನು ಪ್ರಕಟಿಸಿದರೆ ಹಾಗೆ ಪ್ರಕಟವಾದ ದೇಶದಲ್ಲಿ ಅವರಿಗೆ ಆ ದೇಶದ ಕೃತಿಕಾರರಂತೆಯೇ ಹಕ್ಕುಗಳಿರುತ್ತವೆ. ಯಾವುದೇ ಸದಸ್ಯ ದೇಶದ ಪ್ರಜೆಗಳಾಗಿರದ ಕೃತಿಕಾರರು ಸದಸ್ಯದೇಶವೊಂದಲ್ಲಿ ಮೊತ್ತಮೊದಲಿಗೆ ತಮ್ಮ ಕೃತಿಗಳನ್ನು ಪ್ರಕಟಿಸಿದಲ್ಲಿ ಆ ದೇಶದಲ್ಲಿ ಆ ದೇಶದ ಕೃತಿಕಾರರಿಗೆ ಇರುವ ಹಕ್ಕುಗಳು ಅವರಿಗೂ ದೊರಕುತ್ತವೆ. ಉಳಿದ ಸದಸ್ಯದೇಶಗಳಲ್ಲೂ ಈ ಒಡಂಬಡಿಕೆಯಲ್ಲಿ ನಮೂದಿಸಿರುವಂತೆ ಹಕ್ಕುಗಳಿರುತ್ತವೆ.

ಯುನೆಸ್ಕೋದ ಆಶ್ರಯದಲ್ಲಿ ಅಂತರರಾಷ್ಟ್ರೀಯ ಒಡಂಬಡಿಕೆಯ ಕರಡೊಂದು ತಯಾರಾಗಿ ಇದಕ್ಕೆ 1952ರ ಸೆಪ್ಟೆಂಬರ್ 6 ರಂದು ಜಿನೀವದಲ್ಲಿ ರಾಷ್ಟ್ರಗಳು ಸಹಿ ಹಾಕಿದವು. ಜಿನೀವ ಒಡಂಬಡಿಕೆಗೆ ಸಹಿ ಹಾಕಿದ ಪ್ರತಿಯೊಂದು ಸದಸ್ಯದೇಶವೂ ಒಡಂಬಡಿಕೆಯ ಇತರ ದೇಶಗಳ ಪ್ರಜೆಗಳ ಅಪ್ರಕಟಿತ ಕೃತಿಗಳಿಗೆ ತಾನು ತನ್ನ ಪ್ರಜೆಗಳ ಅಪ್ರಕಟಿತ ಕೃತಿಗಳಿಗೆ ನೀಡುವ ಹಕ್ಕುಗಳನ್ನು ನೀಡಲು ಒಪ್ಪುತ್ತದೆ. ಇತರ ಸದಸ್ಯರಾಷ್ಟ್ರಗಳ ಪ್ರಜೆಗಳ ಕೃತಿಗಳಿಗೆ ಸದಸ್ಯರಾಷ್ಟ್ರದಲ್ಲಿ ಮೊದಲಬಾರಿಗೆ ಪ್ರಕಟವಾದ ಕೃತಿಗಳಿಗೆ ಇರುವ ಹಕ್ಕುಗಳನ್ನು ನೀಡುವುದಕ್ಕೆ ಒಪ್ಪುತ್ತದೆ. ಎಲ್ಲ ಪ್ರಕಟಿತ ಕೃತಿಗಳೂ ಕೃತಿಸ್ವಾಮ್ಯದ ಹಕ್ಕುದಾರರ ಹೆಸರು ಮತ್ತು ಪ್ರಕಟನೆಯ ಷರತ್ತುಗಳೊಡನೆ ಬಿ ಎಂಬ ಸಂಕೇತವನ್ನು ಉಳ್ಳವಾಗಿದ್ದರೆ ಅವು ಅಂಥ ರಕ್ಷಣೆಗೆ ಅರ್ಹವಾಗುತ್ತವೆ. ಈ ಒಡಂಬಡಿಕೆಯ ಪ್ರಕಾರ ರಕ್ಷಣೆಯ ಕನಿಷ್ಠ ಅವಧಿ ಕೃತಿಕಾರನ ಜೀವಾವಧಿ ಮತ್ತು ಅವನ ಮರಣದ ಅನಂತರ 25 ವರ್ಷಗಳ ವರೆಗೆ ಇರುತ್ತದೆ. ಕರಾರಿನ ರಾಷ್ಟ್ರಗಳು ನೀಡಬೇಕಾದ ರಕ್ಷಣೆಯ ವಿವರಗಳನ್ನು ಒಡಂಬಡಿಕೆ ಹೇಳುವುದಿಲ್ಲ. ರಕ್ಷ್ಷಣೆಯ ಸ್ವರೂಪ ಮತ್ತು ವಿಶಾಲತೆಗಳನ್ನು ಕರಾರಿನ ರಾಷ್ಟ್ರದ ಪ್ರತ್ಯೇಕ ಕಾಯಿದೆ ನಿಶ್ಚಯಿಸಬಹುದಾಗಿದೆ. ಈ ಒಡಂಬಡಿಕೆಯ ಪ್ರಕಾರ ಒಂದು ಕೃತಿ ಕರಾರಿನ ರಾಷ್ಟ್ರದಲ್ಲಿ ಮೊದಲ ಬಾರಿಗೆ ಪ್ರಕಟವಾಗಿದ್ದರಷ್ಟೇ ಅಲ್ಲದೆ ಕೃತಿಕಾರ ಯಾವುದೇ ಒಂದು ಕರಾರಿನ ರಾಷ್ಟ್ರದ ಪ್ರಜೆಯಾಗಿದ್ದರೆ ಕೃತಿ ಎಲ್ಲಿ ಪ್ರಕಟವಾದರೂ ರಕ್ಷಣೆಯನ್ನು ನೀಡುವದು ಅಗತ್ಯ. ಈ ವಿಷಯದಲ್ಲಿ ಈ ಒಡಂಬಡಿಕೆ ಬರ್ನ್ ಒಡಂಬಡಿಕೆಗಿಂತ ಮುಂದುವರಿದಿದೆ. ಅಮೆರಿಕ, ಆಸ್ಟ್ರೇಲಿಯ, ಗ್ರೇಟ್ ಬ್ರಿಟನ್, ಫಾನ್ಸ್, ಭಾರತ, ಪಾಕಿಸ್ತಾನ, ಇಟಲಿ, ಜಪಾನ್, ಸ್ಪೇನ್, ಪೋರ್ಚುಗಲ್ ಮೊದಲಾದ ರಾಷ್ಟ್ರಗಳು ಇವುಗಳಲ್ಲಿ ಸೇರುತ್ತವೆ. ಮನುಷ್ಯನ ಬುದ್ಧಿ, ಜ್ಞಾನ ಇವುಗಳ ಫಲಗಳು ಸಾರ್ವತ್ರಿಕವಾಗಿ ದೊರಕಬೇಕೆನ್ನುವುದು ಸೋವಿಯತ್ ದೇಶವೇ ಮುಂತಾದ ಸಮಾಜವಾದಿ ರಾಷ್ಟ್ರಗಳ ತತ್ತ್ವವಾದ್ದರಿಂದ ಕೃತಿಸ್ವಾಮ್ಯಕ್ಕೆ ಸಂಬಂಧಿಸಿದ ಯಾವ ಅಂತರರಾಷ್ಟ್ರೀಯ ಒಡಂಬಡಿಕೆಗೂ ಅವು ಸಹಿ ಹಾಕಿಲ್ಲ. (ಜಿ.ಕೆ.ಯು.; ಕೆ.ಜಿ.ಟಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ